ಬಂಧುವರ್ಮ  : -        (ಸು.೧೨೦೦)ರಲ್ಲಿದ್ದ ಜೈನಕವಿ. ೧.ಹರಿವಂಶಾಭ್ಯುದಯ ಎಂಬ ಕಾವ್ಯದ ಕರ್ತೃ. ಈತ ತನ್ನ ಕೃತಿಗಳಲ್ಲಿ ಸ್ವವಿಷಯವಾಗಿ ಏನನ್ನೂ ಹೇಳಿಕೊಂಡಿಲ್ಲ. ಕಮಲಭವ, ನಾಗರಾಜ, ಮಂಗರಸ - ಇವರು ಈತನನ್ನು ಸ್ತುತಿಸಿದ್ದಾರೆ.೨. ಜೀವಸಂಬೋಧನೆ ಈತನ ಇನ್ನೊಂದು ಕೃತಿ.
ಹರಿವಂಶಾಭ್ಯುದಯ 14 ಆಶ್ವಾಸಗಳುಳ್ಳ ಚಂಪೂ ಗ್ರಂಥ. 22ನೆಯ ತೀರ್ಥಂಕರ ನೇಮಿನಾಥನ ಚರಿತೆ ಕಾವ್ಯದ ವಸ್ತು. ಜೊತೆಗೆ ಜೈನಸಾಹಿತ್ಯದಲ್ಲೆ ಜನಪ್ರಿಯವಾದ ಹರಿವಂಶ ಮತ್ತು ಕುರುವಂಶಗಳ ಕಥೆಯೂ ಸೇರಿದೆ. ಇಲ್ಲಿ ಮಹಾಭಾರತದ ಕಥೆ ಗೌಣ. ಇಲ್ಲಿ ಬರುವ ಕೃಷ್ಣ. ಬಲರಾಮ ಮತ್ತು ನೇಮಿನಾಥ ಇವರು ಜೈನ ಶಲಾಕಾಪುರುಷರು, ಕಾವ್ಯಶೈಲಿ ಪ್ರೌಢವಾಗಿದೆ. ವಿಷಯ ಹಾಗೂ ಕಾವ್ಯರೂಪದಲ್ಲಿ ಹೊಸತನವೇನೂ ಕಂಡುಬರುವುದಿಲ್ಲ. ಹಿಂದಿನ ಕಾವ್ಯಗಳಂತೆಯೇ ರಚಿತವಾಗಿದ್ದು ಚರ್ವಿತಚರ್ವಣವಾಗಿದ್ದರೂ ತನ್ನ ವ್ಯಕ್ತಿತ್ವವನ್ನು ತಕ್ಕ ಮಟ್ಟಿಗೆ ಕಾದುಕೊಂಡಿದೆ. 

	ಜೀವಸಂಭೋದನೆ ಜೈನಧರ್ಮಕ್ಕೆ ಸಂಬಂಧಪಟ್ಟ ದ್ವಾದಶಾನುಪ್ರೇಕ್ಷೆಗಳನ್ನು ವಸ್ತುವಾಗುಳ್ಳ ಸ್ವತಂತ್ರ ಶಾಸ್ತ್ರಗ್ರಂಥ; ಚಂಪೂವಿನಲ್ಲಿದೆ. ಇದರಲ್ಲಿ ಆಧ್ರುವಾಭಿಧಾನ, ಅಶರಣಾಭಿಧಾನ, ಏಕತ್ವಾಭಿಧಾನ, ಅನ್ಯತ್ವಾಭಿಧಾನ, ಸಂವರಾಭಿಧಾನ, ನಿರ್ಜರಾಭಿಧಾನ. ಸಂಸಾರಾಭಿಧಾನ, ಬೋಧ್ಯಾಭಿಧಾನ, ಧರ್ಮಾಭಿಧಾನ ಮುಂತಾದ 12 ಅಧಿಕಾರಗಳಿವೆ. ರಚನೆಯಲ್ಲಿ ಮೊದಲಿಗೆ ಎದ್ದುಕಾಣುವ ಆಕರ್ಷಕ ಅಂಶವೆಂದರೆ ಜೀವವನ್ನು ಸಂಬೋಧಿಸಿ ಕಾವ್ಯನಿರೂಪಿಸಿರುವ ತಂತ್ರ. ಇದರಿಂದಾಗಿ ಗ್ರಂಥದುದ್ದಕ್ಕೂ ಆತ್ಮೀಯತೆ ಕಂಡುಬರುತ್ತದೆ. ಕೃತಿಯ ಒಟ್ಟು ರಚನೆ ಜೈನಪುರಾಣಗಳಿಗೆ ಸಮೀಪವಾಗಿದೆ. ಅಜ್ಞಾನದಿಂದ ಜೀವನಾ ತಕ್ಕ ರೀತಿಯಲ್ಲಿ ನಿಶ್ಚಯಿಸುವ ಶಕ್ತಿಯಿಲ್ಲದೆ ಸಂಸಾರದಲ್ಲಿ ತೊಳಲುವುದನ್ನು ತಪ್ಪಿಸಿಕೊಳ್ಳುವುದು ಹೇಗೆಂಬುದನ್ನು ತಿಳಿಯುವಂತೆ ತಾನು ಕಾವ್ಯ ನಿರೂಪಿಸುತ್ತಿರುವುದಾಗಿ ಕವಿ ಹೇಳಿಕೊಂಡಿದ್ದಾನೆ. ಇದರಿಂದಾಗಿ ಕಾವ್ಯ ನೀತಿಪ್ರದವೂ ವೈರಾಗ್ಯಬೋಧಕವೂ ಆಗಿದೆ. ತಾನು ಹೇಳುವ ತತ್ತ್ವ ನಿರೂಪಣೆ ನೀರಸವಾಗದಂತೆ ಸಂದರ್ಭೋಚಿತವಾಗಿ ಕಥೆಗಳನ್ನು ತಂದು ಧಾರ್ಮಿಕ ಅಂಶವನ್ನು ಮತ್ತು ಕಾವ್ಯಾಂಶವನ್ನು ಹಾಸುಹೊಕ್ಕಾಗಿ ನೇದಿದ್ದಾನೆ. ಕೃತಿ ಜೈನಮತೀಯ ಗ್ರಂಥವಾದರೂ ಪರಮತ, ಸಹಿಷ್ಣುತೆ, ವಿಶಾಲದೃಷ್ಟಿ ಕಂಡುಬರುತ್ತದೆ. ವೃತ್ತ ಕಂದ ಗದ್ಯ ರಗಳೆ-ಇವುಗಳ ರಚನೆಯಲ್ಲಿ ಬಿಗಿಯಿದೆ. ಗಾದೆಗಳೂ ಪಡೆನುಡಿಗಳೂ ಹಿತಮಿತವಾಗಿ ಬೆರೆತು ಕಾವ್ಯ ಶೈಲಿ ಸುಲಲಿತವಾಗಿದ್ದು ಮನಸೆಳೆಯುವಂತಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ